Jul 29, 2008

ನಾಚಿಕೆಯಿಲ್ಲದವರ ನಾನೇನೆಂಬೆ

ಊರಿನ ರಾಜಕೀಯ ಮುಖಂಡ ಪದ್ಮನಾಭನ ಮನೆ ಮುಂದೆ ಹತ್ತಾರು ಬೈಕ್ ನಿಂತಿದ್ದವು. ನಾಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯುವುದಿತ್ತು. ಅಧ್ಯಕ್ಷ ಸ್ಥಾನಕ್ಕೆ ಎಸ್‌ಸಿ ಮೀಸಲು ಇದ್ದದ್ದರಿಂದ ಹಟ್ಟಿ ತಿಮ್ಮಯ್ಯನಿಗೆ ಈ ಪಟ್ಟ ಕಟ್ಟೋದು ಅನಿವಾರ್ಯವೂ, ನಿಶ್ಚಿತವೂ ಆಗಿತ್ತು. ತಿಮ್ಮಯ್ಯನನ್ನು ಚುನಾವಣೆಗೆ ನಿಲ್ಲಿಸಿಕೊಂಡಿದ್ದ ಪದ್ಮನಾಭ ಆ ಕ್ಷೇತ್ರದ ಸಾಮಾನ್ಯ ಸ್ಥಾನದಿಂದ ತಾನೂ ಸದಸ್ಯನಾಗಿ ಆಯ್ಕೆಯಾಗಿದ್ದ.
ಪದ್ಮನಾಭ ಊರ ಹೊರಗಿನ ಹಟ್ಟಿ ಮನೆಗನ್ನೆಲ್ಲಾ ಹೊಕ್ಕು ಬಂದವನೇ. ಲಂಕೇಶ, ಅನಂತಮೂರ್ತಿ, ದ್ಯಾವನೂರು-ಗೀವ್ನೂರು ಅಂತ ಊರಿನ ಅರೆಬರೆ ಓದುಗರ ಮುಂದೆ ಹೇಳಿಕೊಂಡಿದ್ದಾತ. ಮಾತೆತ್ತಿದ್ದರೆ ಜಾತಿ-ಗೀತಿ ಎಲ್ಲೈತೆ ಅಂತಿದ್ದ. ಹಟ್ಟಿ ಜನರ ಆದಿಯಾಗಿ, ಕುರುಬ್ರು, ಕುಂಬಾರ್ರು, ಮಡಿವಾಳ್ರು ಮೊದಲಾದ ಮಧ್ಯಮ ಜನಾಂಗದವರ ಜತೆ ಒಡಾಡಿಕೊಂಡಿದ್ದ.
ತಿಂಗಳ ಹಿಂದೆ ಪಂಚಾಯ್ತಿ ಚುನಾವಣೆಗೂ ಮೊದಲು ಯುಗಾದಿ ಹಬ್ಬದಂದು ಊರಿನ ಕಲ್ಲುಕಟ್ಟೆ ಮೇಲೆ ಹುಣಸೆ ಬೀಜ ಹಾಕುವ ದುಡ್ಡಿನ ಆಟ ನಡೆದಿತ್ತು. ಹಟ್ಟೀಲು ಒಂದು ಗುಂಪಿತ್ತು. ಇದ್ರಲ್ಲೂ ಎಂಥದು ಸಪರೇಟು ಎಂದಿದ್ದ ಪದ್ಮನಾಭ ಊರು-ಹಟ್ಟಿ ಜನರೆನ್ನೆಲ್ಲಾ ಕರೆದು ಮಧ್ಯದಲ್ಲಿರೋ ಬುಗುರಿ ಮರದ ಕೆಳಗೆ ಇಸ್ಟೀಟಿಗೆ ಕುಂತಿದ್ದ.ಆಟ ಗೊತ್ತಿಲ್ಲದವರಿಗೆ ಹೇಳಿ ಕೊಡುತ್ತಿದ್ದ. ಮಧ್ಯಾಹ್ನದ ಹೊತ್ತಿಗೆ ಅಲ್ಲಿ ದೊಡ್ಡ ಗುಂಪೇ ನೆರೆದಿತ್ತು.
ಹಟ್ಟಿ ಐಕ್ಳು ಅಂಗಿ ಮೂಲೇಲಿ, ಲಂಗದಲ್ಲಿ ಏನೋ ಹಾಕಿಕೊಂಡು ಕೈಯಲ್ಲಿ ಕೆದಕುತ್ತಾ ಎಣಿಸಿದಂತೆ ಒಂದೊಂದೇ ಬಾಯಿಗೆ ಎಸೆದುಕೊಳ್ಳುತ್ತಿದ್ದರು. ಇಸ್ಪೀಟ್ ಆಟದ ಕಡೆ ಅವಸರದಲ್ಲಿ ಬರುತ್ತಿದ್ದ ಮಡಿವಾಳ್ರ ಮಾಲಿಂಗ ಏನ್ರೋ ಅದು ಅಂದದ್ದಕ್ಕೆ ಆ ಐಕ್ಳು ‘ಪದ್ಮನಾಭಣ್ಣ ಹಂಚಿದ ಬೇವುಬೆಲ್ಲಾ’ ಎಂದು ಹಲ್ಲು ಕಿರಿದಿದ್ದರು. ಬೇವಿನ ಹೂವಿನ ಮಧ್ಯೆ ಅಲ್ಲೊಂದು ಇಲ್ಲೊಂದು ಇದ್ದ ಕಡಳೆ, ಬೆಲ್ಲ ಹೆಕ್ಕಿ ತೆಗೆಯುತ್ತಿದ್ದರು. ಕುಂಬಾರ್ರ ನಂಜಶೆಟ್ಟಿ ಬೆಳಗ್ಗೆ ಪದ್ಮನಾಭನ ಮನೆ ಕಡೆ ಬೇವಿನ ಹೂವಿನ ಹೊರೆ ಹೊತ್ಕೊಂಡೋಗಿದ್ದು ಇದ್ಕೇನಾ ಅಂದ್ಕೊಂಡ ಮಾಲಿಂಗ, ಜೇಬು ತಡವಿಕೊಳ್ಳುತ್ತಾ ಇಸ್ಪೀಟ್ ಆಟದ ಕಡೆ ಬಿರುಸಾಗಿ ನಡೆದಿದ್ದ. ಆ ವರ್ಷ ಊರಲ್ಲಿ ಯುಗಾದಿ ರಂಗೇರಿತ್ತು......
ನಾಳೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಾದಿ ಏರಲಿರುವ ತಿಮ್ಮಯ್ಯನ ಮನೆ ಮುಂದೆ ಯಾವುದೇ ಸಂಭ್ರಮ ಇರಲಿಲ್ಲ. ತಿಮ್ಮಯ್ಯನ ಹೆಂಡತಿ ಚಂದ್ರವ್ವ ಮನೆ ಮುಂದೆ ರಟ್ಟೆಗೆ ಹರ್ಷದ ಶಕ್ತಿ ತುಂಬಿಕೊಂಡು ಬಟ್ಟೆ ತೊಳೆಯುತ್ತಿದ್ದಳು. ಪುಡಿ ಸೋಪಿನಿಂದ ಪುರಾತನ ಪಂಜೆಯೊಂದನ್ನು ಬೆಳ್ಳಗಾಗಿಸಲು ಹೆಣಗುತ್ತಿದ್ದಳು. ಅಷ್ಟು ಬಿಟ್ಟರೆ ಬೇರೇನೂ ವಿಶೇಷ ಅಲ್ಲಿರಲಿಲ್ಲ.
ಪದ್ಮನಾಭನ ಮನೆ ಪಡಸಾಲೆಯಲ್ಲಿ ಪಂಚಾಯ್ತಿಗೆ ಎಲೆಕ್ಟ್ ಆಗಿರೋ ಮೂರ್‍ನಾಲ್ಕು ಹಳ್ಳಿಗಳ ಪ್ರಮುಖ ಸದಸ್ಯರು ಸೇರಿದ್ದರು. ಚಪ್ಪಲಿ ಬಿಡೋ ಮೂಲೇಲಿ ತಿಮ್ಮಯ್ಯ ಕೂತಿದ್ದ. ಶ್ವೇತವಸ್ತ್ರಧಾರಿಗಳು ಬೆಂಚು, ಚೇರುಗಳ ಮೇಲೆ ಕುಳಿತು ಹರಟೆಯಲ್ಲಿ ತೊಡಗಿದ್ದರು. ನಾಳೆ ನಡೆಯಲಿರುವ ಅಧ್ಯಕ್ಷ ಚುನಾವಣೆಯಲ್ಲಿ ತಿಮ್ಮಯ್ಯನನ್ನು ಗೆಲ್ಲಿಸಲು ತಾವೆಲ್ಲಾ ಸಾಹಸ ಮಾಡುತ್ತಿರುವಂತೆ ಮಾತಾಡುತ್ತಿದ್ದರು. ಒಬ್ಬ ಅಪಸ್ವರ ತೆಗೆಯುವುದು ಮತ್ಯಾರೋ ಸುಮ್ಮನಾಗಿಸುವುದು ನಡೆದಿತ್ತು. ಅದೆಲ್ಲದಕ್ಕೂ ತಿಮ್ಮಯ್ಯ ಒಬ್ಬನೇ ಪ್ರೇಕ್ಷಕನಾಗಿದ್ದ.
ತಿಮ್ಮಯ್ಯನ ದೃಷ್ಟಿ ಅಲ್ಲಿ ರಾಶಿ ಬಿದ್ದಿದ್ದ ಚಪ್ಪಲಿ ಮೇಲೆ ನೆಟ್ಟಿತ್ತು. ಆತನ ಕಣ್ಣು ತನ್ನ ವೃತ್ತಿ ರೂಢಿಯಂತೆ ಹರಿದ ಚಪ್ಪಲಿ ಹುಡುಕುತ್ತಿದ್ದವು. ಅಲ್ಲಿ ಹರಿದವಾಗಲೀ, ಹಳೆಯವಾಗಲೀ ಚಪ್ಪಲಿ ಇರಲಿಲ್ಲ. ಉಂಗ್ಟ ಕಿತ್ತ, ತೇಪೆ ಹಾಕಿದ ಒಂದು ಜೊತೆ ಮಾತ್ರ ಸ್ವಲ್ಪ ದೂರದಲ್ಲಿ ಬಿದ್ದಿದ್ದವು. ಅವೂ ತಿಮ್ಮಯ್ಯನವು ಎಂದು ಯಾರಿಗಾದರು ಅರ್ಥವಾಗುತ್ತಿತ್ತು.
ಆಗಾಗ್ಗೆ ಆ ಗುಂಪಿನಿಂದ ‘ಅಲ್ವೇನೋ ತಿಮ್ಮಯ್ಯ’ ಎಂಬ ಉತ್ತರ ನಿರೀಕ್ಷಿಸದ ಪ್ರಶ್ನೆ ಕೇಳಿ ಬರುತ್ತಿದ್ದವು. ಕಿವಿಗೆ ಹಾಕಿಕೊಳ್ಳಲಿಕ್ಕೂ ಹೋಗದ ತಿಮ್ಮಯ್ಯ ಎಲ್ಲದಕ್ಕೂ ಊಗುಟ್ಟುತ್ತಿದ್ದ. ಪಂಚೆಗಿಂಚೆ ತೊಳ್ಕೊಂಡು ನಾಳೆಗೆ ರೆಡೆಯಾಗು ನಡಿ ತಿಮ್ಮಯ್ಯ ಎಂದು ಹೇಳಿದ ಗುಂಪು ಪದ್ಮನಾಭನ ಜತೆ ಸಾಲು ಬೈಕ್‌ನಲ್ಲಿ ಎತ್ತಲೋ ಹೋಯಿತು.
ಮರುದಿನ ತಿಮ್ಮಯ್ಯ ಅಧ್ಯಕ್ಷನಾಗಿ ಆಯ್ಕೆಯಾದ ಸುದ್ದಿ ಬಂತು. ಪದ್ಮನಾಭನ ಮನೆ ಕಡೆಯಿಂದ ಹೊಬ್ಬಟ್ಟಿನ ವಾಸನೆ ಕೂಡ. ತಿಮ್ಮಯ್ಯ ಹೆಗಲ ಮೇಲೆ ಪಂಚೆ ಹಾಕಿಕೊಂಡು ಸಂಜೆ ತೂರಾಡುತ್ತಾ ಮನೆ ಸೇರಿದ. ಸಾರಾಯಿ ಅಂಗಡಿ ಹನುಮಂತನಿಗೆ ಪದ್ಮನಾಭ ಬೆಳಗ್ಗೆ ೫೦ರ ನೋಟು ಕೊಟ್ಟಿದ್ದಕ್ಕೂ ಇದಕ್ಕೂ ಸಂಬಂಧವಿತ್ತು. ಕತ್ತಲಾಗುತ್ತಾ ಬಂದರೂ, ಈಚಲು ತೋಪಿನಲ್ಲಿ ಇಸ್ಪೀಟು ಗ್ಯಾಂಗು ಮುಂದುವರಿದಿತ್ತು.
ಅಲ್ಲಿಗೆ ಮೂರು ದಿನಕ್ಕೆ ಊರಿನಲ್ಲಿ ಸನ್ಮಾನ ಸಮಾರಂಭ ನಡೆಯಿತು. ಪದ್ಮನಾಭನಿಗೆ ಹಾರಗಳ ಸುರಿಮಳೆಯಾಯಿತು. ತಿಮ್ಮಯ್ಯ ತನ್ನ ಕೈಗೆ ಬಂದಿದ್ದ ಒಂದು ಮೋಟು ಹಾರ ಹಿಡಿದು ಮನೆಗೆ ಮರಳಿದ. ಹ್ಯಾಗೂ ಕೊರಳಿಗೆ ಹಾಕ್ಕೊಂಡಿಲ್ವಲ್ಲ ಎಂದುಕೊಂಡು ಮನೆಯಲ್ಲಿದ್ದ ಕ್ವಾದಿನೂರು ಮಠದ ಬಸವಲಿಂಗೇಶ್ವರಸ್ವಾಮಿ ಫೋಟೋಕ್ಕೆ ಹಾರ ಹಾಕಿ ಕೈ ಮುಗಿದ. ಕಾಲೇಜಿನಲ್ಲಿ ಓದುತ್ತಿದ್ದ ಮಗ ವರ್ಷದ ಹಿಂದೆ ತಂದಿಟ್ಟಿದ್ದ ಅಂಬೇಡ್ಕರ್ ಫೋಟೋ ಪಕ್ಕದಲ್ಲಿತ್ತು. ಚಂದ್ರವ್ವ ಹಾರದಲ್ಲೇ ಒಂದೆರಡು ಎಸಳು ಕಿತ್ತು ಮುಡಿಗೇರಿಸಿಕೊಂಡಳು.
............................................
ಅಲ್ಲಿಗೆ ಎರಡು ತಿಂಗಳಿಗೆ ಬೀದಿ ನಾಟಕವಾಡಲು ಒಂದು ತಂಡ ಊರಿಗೆ ಬಂದಿಳಿಯಿತು. ಗ್ರಾಮ ಪಂಚಾಯ್ತಿ ಅಕಾರ, ಸದಸ್ಯ, ಅಧ್ಯಕ್ಷ, ಉಪಾಧ್ಯಕ್ಷರ ಹಕ್ಕು-ಕರ್ತವ್ಯ, ಮೀಸಲು ಉದ್ದೇಶ, ಗ್ರಾಮ ನೈರ್ಮಲ್ಯ, ಅನುದಾನ ಸದುಪಯೋಗ ಮೊದಲಾದ ವಿಷಯ ಬೀದಿ ನಾಟಕದ ವಸ್ತು. ಬೀದಿ ನಾಟಕ ಆಡಲು ಪಂಚಾಯತ್ ರಾಜ್ ಇಲಾಖೆ ತಂಡವೊಂದನ್ನು ಕಳುಹಿಸಿತ್ತು. ತಾಲೂಕು ಕೇಂದ್ರ ಪೊನ್ನೂರಿನ ಹಾಸ್ಟೆಲ್‌ನಲ್ಲಿದ್ದು ಡಿಗ್ರಿ ಓದಿಕೊಂಡಿದ್ದ ತಿಮ್ಮಯ್ಯನ ಮಗ ಈರಯ್ಯನೂ ನಾಟಕ ತಂಡದಲ್ಲಿ ಬಂದಿದ್ದ.
ತಂಡದ ಮುಖ್ಯಸ್ಥ ಬಂಟಿ ಯಾರೋ ಕೈ ತೋರಿಸಿದ್ದಕ್ಕೆ ಪದ್ಮನಾಭನ ಮನೆ ಕಡೆ ನಡೆದ. ಬಂಟಿಯಿಂದ ವಿಷಯ ಕೇಳಿದ ಪದ್ಮನಾಭ ‘ನಮ್ಮೂರ್‍ನಾಗೆ ಜಾಗೃತಿ ಮೂಡ್ಸೋ ಅಂಥದ್ದೇನೂ ಇಲ್ಲ. ಎಲ್ರೂ ಬುದ್ಧಿವಂತ್ರಾಗವ್ರೆ. ಹಟ್ಟಿ ತಿಮ್ಮಯ್ಯನೇ ಗ್ರಾಮ ಪಂಚಾಯ್ತಿ ಅಧ್ಯಕ್ಷ. ಎಲ್ಲ ಚೆನ್ನಾಗಿ ನಡೆಸ್ಕೊಂಡು ಹೋಗ್ತಾವ್ನೆ. ಜನಕ್ಕೆ ಎಲ್ಲಾ ವಿಷ್ಯಾನೂ ನಾನೇ ಹೇಳ್ತೀನಿ. ಊರು ಜಾತಿ-ಗೀತೆ ಮೀರೈತೆ. ನಮ್ಮೂರೊಂತರಾ ಮಾಡೆಲ್ ವಿಲೇಜ್ ಇದ್ಹಂಗಿದೆ’ ಎಂದು ವಿವರಿಸಿದ. ನಾಟ್ಕ ಆಡಿ ಇಲ್ಲೇಕೆ ನಿಮ್ ಶಕ್ತಿ ವೇಸ್ಟ್ ಮಾಡ್ತೀರಾ, ಮುಂದಿನ ಊರ್ ನೋಡ್ಕಳಿ ಎಂದು ನಾಟಕವಾಡಲು ತನ್ನ ಅನುಮತಿ ನಿರಾಕರಿಸಿದ.
ಹಾಗಲ್ಲಾ ಸದಸ್ರೇ, ಊರ್ ಹೆಂಗೈತೋ ನಮಗ್ಗೊತ್ತಿಲ್ಲ. ಇಲಾಖೆಯವರು ನಾಟ್ಕ ಆಡಿ ಬರೋಕೆ ದುಡ್ಡು ಕೊಟ್ಟು ಕಳ್ಸಿದ್ದಾರೆ. ನಾವ್ ಆಡ್ಲೇ ಬೇಕು. ನಾಟ್ಕ ಆಡಿದ್ದರ ಬಗ್ಗೆ ಮುಖಂಡರಿಂದ ಫಾರಂಗೆ ತುಂಬಿಸ್ಕೊಂಡು ಹೋಗ್ಬೇಕು ಎಂದ.
ಪಾರಂ ತಾನೇ ತಾ ಇಲ್ಲಿ ನಾನೇ ತುಂಬಿಕೊಡ್ತೀನಿ. ನಿಮ್ಗೂ ಸಲೀಸಾತು. ಹೊರ್‍ಡ್ರಿ ಇಲ್ಲಿಂದ ಎಂದು ಕಡ್ಡಿ ಮುರಿದಂತೆ ಪದ್ಮನಾಭ ಹೇಳಿದ. ಹಾಗೆಲ್ಲಾ ಆಗೋಲ್ಲಾ, ನಾಟ್ಕ ಆಡ್ಲೇ ಬೇಕೂಂತ ಮೇಲಕಾರಿ ಆದೇಶ ಇದೆ ಎಂದ ಬಂಟಿ.
ನಾನ್ ಇಷ್ಟು ಹೇಳಿದ್ದೀನಿ, ಇನ್ಮೇಲೆ ನಿಮ್ಮಿಷ್ಟ. ನಾಟ್ಕ ಆಡೋವಾಗ ಯಾರಾದ್ರು ಕುಡಿದು ಬಂದು ಗಲಾಟೆ ಮಾಡಿದ್ರೆ ನಾನ್ ಜವಾಬ್ದಾರ ಅಲ್ಲ ಎಂದು ಖಡಕ್ಕಾಗಿ ಹೇಳಿ ಒಳಗೋದ. ಬೇಸರದಿಂದ ಎದ್ದು ಬಂದ ಬಂಟಿ, ಈರಯ್ಯನ ಹತ್ತಿರ ಎಲ್ಲವನ್ನೂ ವಿವರಿಸಿದ. ಅದ್ಕ್ಯಾಕೆ ತಲೆ ಕೆಡಿಸಿಕೊಳ್ತೀಯಾ, ನಮ್ಮಪ್ಪನೇ ಅಧ್ಯಕ್ಷ ಅಲ್ವಾ ಅನುಮತಿ ಕೊಡುಸ್ತೀನಿ ನಡಿ ಎಂದು ತನ್ನ ಮನೆಗೆ ಬಂಟಿಯನ್ನು ಕರೆದೊಯ್ದ.
ಎಲ್ಲ ವಿಷಯ ಕೇಳಿದ ತಿಮ್ಮಯ್ಯ, ಪದ್ಮನಾಭಣ್ಣೋರು ಹಂಗ್ಹೇಳಿದ್ದಾರೆ ಅಂದ್ಮೇಲೆ ಹೆಂಗಂಪ್ಪಾ ಎಂದು ಒಲ್ಲೆ ಎಂದ. ಈರ ಏನೇನೋ ವಿವರಿಸಿ ಧೈರ್ಯ ತುಂಬಿದ. ಆದರೆ ಅಪ್ಪ ಕತ್ತಲ್ಲಾಡಿಸಿದ. ನಾಟ್ಕ ಆಡೋದೆ ಆದ್ರೆ ನಮ್ ಹಟ್ಟೀಲೇ ಆಡ್ರಿ. ಊರ್ ಮುಂದುಕ್ಕೆ ಹೋಗ್ಬೇಡಿ ಎಂದು ರಿಯಾಯಿತಿ ತೋರಿದ.
ಇದೆಲ್ಲಾ ನಿನಗ್ಯಾಕೆ ಬೇಕಿತ್ಲಾ ಈರ. ಚೆನ್ನಾಗಿ ಓದೋದು ಬಿಟ್ಟು ನಾಟ್ಕ-ಗೀಟ್ಕ ಅಂತ ಯಾಕ್ಲಾ ಹೋದೆ ಎಂದು ತುಸು ಗದರಿಸಿದ. ಅದೆಲ್ಲಾ ನಿಂಗೊತ್ತಾಗೋಲ್ಲಾ ಬಿಡು. ಚೆನ್ನಾಗೇ ಓದ್ತಾ ಇದ್ದೀನಿ. ಕಾಲೇಜಿಗೆ ರಜ ಇದ್ದಾಗ ಬೀದಿ ನಾಟ್ಕ ತಂಡದ ಜತೆ ಹೋಗ್ತಾ ಇರೋದ್ರಿಂದ ಕೈಗೆ ಕಾಸು ಸಿಗ್ತೈತೆ. ಅದ್ಕೆ ನಿಮ್ಮತ್ರ ಯಾವತ್ತಾದ್ರೂ, ಖರ್ಚಿಗೆ ಕಾಸು ಕೇಳಿದ್ದೀನಾ ಎಂದು ಅಪ್ಪ ಸುಮ್ಮನಾಗುವಂತೆ ಮಾಡಿದ.
ಹಟ್ಟಿ ಜನುದ್ದೆಲ್ಲಾ ಊಟ ಮುಗ್ದಿರೋ ಹೊತ್ತು. ರಾತ್ರಿ ಎಂಟಕ್ಕೆ ಮೂರು ಗ್ಯಾಸ್ ಲೈಟು ಹಚ್ಚಿಕೊಂಡ ತಂಡ ಬೀದಿ ನಾಟ್ಕ ಆಡೋಕೆ ರೆಡಿಯಾಯ್ತು. ‘ಜಂಗಡ ಜಡ್ಡೆ ನಕ್ಕಾ ನಕ್ಕಾ’....ಬಿರುನಾದ ತಮಟೆ ಸದ್ದಿನೊಂದಿಗೆ ಈರ ರಂಗ ಪ್ರವೇಶಿಸಿದ. ‘ಕೇಳ್ರಪ್ಪೋ, ಕೇಳಿ ಹೊಲೇರ ಕಮಲಿ, ಮಂಜೇಗೌಡುನ್ನ ಕರ್‍ಕೊಂಡು ಓಡೋಗಿರೋ ವಿಷ್ಯಕ್ಕೆ ಸಂಜೆ ಊರ್ ಪಂಚಾಯ್ತಿ ಅಯ್ತಂತೆ...’ ಒಂದೇ ಸಮನೆ ಒದರಿದ. ನಾಟ್ಕಕ್ಕೆ ಖದರು ಬಂದಿತ್ತು.
ಕುಲವಾಡಿ ಪಾತ್ರದಲ್ಲಿ ರಂಗ ಪ್ರವೇಶಿಸುವ ಈರ ಮೀಸಲು ಅವಕಾಶ ಪಡೆದು ಗ್ರಾಮ ಪಂಚಾಯ್ತಿ ಸದಸ್ಯ, ನಂತರ ಅಧ್ಯಕ್ಷನಾಗುವ ಪ್ರಮುಖ ಪಾತ್ರಧಾರಿ. ನಾಟ್ಕ ನೋಡಲು ಬಂದಿದ್ದ ತಿಮ್ಮಯ್ಯ ಮತ್ತು ಪತ್ನಿ ಚಂದ್ರಮ್ಮ ಮಗನ ನಟನೆಯನ್ನೇ ಎವೆ ಇಕ್ಕದೆ ನೋಡುತ್ತಾ ಒಳಗೊಳಗೆ ಖುಷಿ ಪಟ್ಟರು. ಪದ್ಮನಾಭ ಮಾತ್ರ ಆ ಕಡೆ ಸುಳಿಯಲಿಲ್ಲ.
ಕುಲವಾಡಿಯೊಬ್ಬ ಗ್ರಾಮ ಪಂಚಾಯಿತಿ ಅಧ್ಯಕ್ಷನಾದರೂ ಕೆಲವರ ಕೈಗೊಂಬೆಯಾಗುವ ದೃಶ್ಯಕ್ಕೆ ನಾಟ್ಕ ಬಂದಿತ್ತು. ಕಂಠಪೂರ್ತಿ ಕುಡಿದು ಬಂದ ಹಟ್ಟಿಯ ಆಂಜನಿ ಮತ್ತು ಕೆಂಚ, ಯಾವಾನ್ಲಾ ನಿಮ್ಮುನಿಲ್ಲಿ ನಾಟ್ಕ ಆಡು ಅಂದೋನು ಎಂದು ಜಗಳ ತೆಗೆದವರೇ ಲೈಟಿಗೆ ಕಲ್ಲು ಬೀಸಿದರು. ಅಲ್ಲಿ ಕತ್ತಲು ಆವರಿಸಿತು. ಜನ ಚೆಲ್ಲಾಪಿಲ್ಲಿಯಾದರು.
ತಿಮ್ಮಯ್ಯ ಮತ್ತು ಚಂದ್ರಮ್ಮ ಮನೆ ಸೇರಿದರೆ ಸಾಕೆಂದು ದಾರಿ ಹಿಡಿದರು. ಈರಂಗೆ ಇದೆಲ್ಲಾ ಯಾಕ್ ಬೇಕಿತ್ತು. ನಾನ್ ಹೇಳಿದ್ರೂ, ಕೇಳ್ಲಿಲ್ಲಾ. ನೋಡೀಗಾ ಏನಾಯ್ತು ಎಂದು ಹೆಂಡತಿಯ ಮೇಲೆ ರೇಗಾಡುತ್ತಾ ನಡೆದ ತಿಮ್ಮಯ್ಯ. ಪದ್ಮನಾಭನ ಮನೆ ಮುಂದಿನ ಲೈಟು ಇನ್ನೂ ಉರಿಯುತ್ತಿತ್ತು. ತಂಡದವರು ವಿಯಿಲ್ಲದೆ ಗಂಟುಮೂಟೆ ಕಟ್ಟಿದರು. ಜೀಪಿನಲ್ಲಿ ಬಂದಿದ್ದ ತಂಡ ಪೇಟೆಗೆ ಮರಳಿತು. ಈರ ಬೆಳಗ್ಗೆ ಬರುವುದಾಗಿ ಹೇಳಿ ಉಳಿದುಕೊಂಡ.
ಮಿಡಲ್ ಸ್ಕೂಲಿನಲ್ಲಿ ಓದುತ್ತಿದ್ದಾಗಲೇ ಈರನಿಗೆ ನಾಟಕದ ಹುಚ್ಚಿತ್ತು. ಅವನು ಆರನೇ ತರಗತಿಯಲ್ಲಿದ್ದಾಗೊಮ್ಮೆ ಶಾಲಾ ವಾರ್ಷಿಕೋತ್ಸವಕ್ಕೆ ಶಿಕ್ಷಕರು ೨ ಗಂಟೆ ಮಹಾಭಾರತ ನಾಟಕ ಕಲಿಸಿದ್ದರು. ಈರನಿಗೆ ಕರ್ಣನ ಪಾತ್ರ. ಎಲ್ಲರಿಗಿಂತ ಮೊದಲೇ ಮಾತು-ಅಭಿನಯ ಕಲಿತಿದ್ದ ಈರ ಶಿಕ್ಷಕರಲ್ಲೂ ಬೆರಗು ಮೂಡಿಸಿದ್ದ. ವಾರ್ಷಿಕೋತ್ಸವ ವಾರ ಬಾಕಿ ಇದೆ ಎನ್ನುವಾಗ ಈರ, ಆ ಪಾತ್ರ ಮಾಡಲ್ಲ ಅಂತ ರಂಕಲು ತೆಗೆದ. ಶಿಕ್ಷಕರು ಕಾರಣ ಕೇಳಿದ್ದಕ್ಕೆ ಸುಮ್ಮನೆ ಮೂಲೆಯಲ್ಲಿ ಕತ್ತಲ್ಲಾಡಿಸಿ ಅಳುತ್ತಾ ನಿಂತ. ಏನೇ ಮಾಡಿದರೂ ಶಿಕ್ಷಕರಿಂದ ಅವನ ಬಾಯಿ ಬಿಡಿಸಲಾಗಲಿಲ್ಲ. ನೀನು ಈಗ ಹಿಂಗದ್ರೆ ಹೇಗೋ. ಮೊದಲೇ ಹೇಳಿದ್ರೆ ಆ ಪಾತ್ರಕ್ಕೆ ಯಾರನ್ನಾದ್ರು ಹಾಕ್ಕೊಳ್ತಿದ್ವಿ. ಹೋಗ್ಲಿ ಕಾರಣನಾದ್ರು ಹೇಳು ಎಂದು ಒತ್ತಾಯಿಸಿದರು. ಆದರೂ ಆತ ತುಟಿ ಎರಡು ಮಾಡಲಿಲ್ಲ. ಫೇಲ್ ಮಾಡುತ್ತೇವೆ ಎಂದು ಗದರಿಸಿದಾಗ ಸಣ್ಣಗೆ ಬಾಯಿ ತೆರೆದ ಈರ ಕರ್ಣನ ಪಾತ್ರ ಮಾಡೋಲ್ಲಾ ಅಂದ. ಮಾಡ್ಲೇಬೇಕಂದ್ರೆ ಕಥೆ ಬೇರೆ ಮಾಡಿ ಕರ್ಣನನ್ನ ಪಾಂಡವರ ಕಡೆ ಕಳ್ಸ್ತೀರಾ ಎಂದ. ಶಿಕ್ಷಕರು ಸಿಟ್ಟಿನಲ್ಲೂ ನಕ್ಕಿದ್ದರು. ಆ ಕಥೆ ನಾವ್ ಬರೆದಿದ್ದಲ್ಲೋ, ಅದನ್ನ ಬದಲಿಸಲಿಕ್ಕೆ ಬರಲ್ಲ ಎಂದರು. ಹಂಗಾರೇ ಆ ಪಾತ್ರ ನಾ ಮಾಡಲ್ಲ ಎಂದು ಈರ ಕಡ್ಡಿ ಮುರಿದಂತೆ ಹೇಳಿದ್ದ.
ಎಲ್ಲೋ ಹುಟ್ಟಿ ಬೆಳೆದ ಕರ್ಣ, ಕೌರವರ ಕೈಯಾಳಾಗಿ ಪಾಂಡವರ ವಿರುದ್ಧ ನಿಲ್ಲೋದು ಸರೀನಾ ಎಂದು ತನ್ನ ಗೆಳೆಯರ ಬಳಿ ಅಸ್ಪಷ್ಟವಾಗಿ ಈರ ಹೇಳಿಕೊಂಡಿದ್ದ.
..................................................
ಈರ ಬೆಳಗ್ಗೆ ಅಪ್ಪನ ಜತೆ ಏನೋ ಮಾತಿಗೆ ಕುಂತಿದ್ದ. ಗ್ರಾಮ ಪಂಚಾಯ್ತಿ ಉದ್ದೇಶ, ಎಲೆಕ್ಷನ್ನು, ಮೀಸಲಾತಿ, ಅಧ್ಯಕ್ಷ ಗಾದಿ, ಹಕ್ಕು-ಜವಾಬ್ದಾರಿ ಮುಂತಾದವುಗಳ ಬಗ್ಗೆ ಅವ್ವನ ಎದುರು ಅಪ್ಪನಿಗೆ ಹೇಳುತ್ತಿದ್ದ. ತಿಮ್ಮಯ್ಯ ಮಾತ್ರ ಯಾವುದೂ ಅರ್ಥವಾಗದು ಎಂಬಂತೆ ಕುಳಿತಿದ್ದ.
ಈರ ಮಾತು ಮುಂದುವರಿಸಿದಾಗ, ಅದೆಲ್ಲಾ ನನ್ಗೆ ಅರ್ಥವಾಗೋಲ್ಲಾ. ವಯಸ್ಕ್ರ ಶಿಕ್ಷಣದೋರು ಹೆಂಗೋ ಸೈನ್ ಹಾಕೋದು ಕಲ್ಸಿದ್ದು ಈಗ ಅನುಕೂಲಾಯ್ತು. ಸೈನು ಹಾಕು ಅಂದಿದ್ಕಡೆ ಹಾಕ್ತೀನಿ. ಹಾಗೊಮ್ಮೆ ಈಗೊಮ್ಮೆ ಕೈಗೆ ಒಂಚೂರು ಕಾಸು ಕೊಡ್ತಾರೆ. ಎಲ್ಲಾನೂ ಪದ್ಮನಾಭಣ್ಣೋರು ನೋಡ್ಕೋತಾರೆ ಬಿಡು. ಅದ್ಕೆಲ್ಲಾ ಯಾಕೆ ತಲೆ ಕೆಡಿಸ್ಕೊಳ್ಳಿ ಎಂದು ಮಗನ ಮಾತು ನಿಲ್ಲಿಸಲು ನೋಡಿದ. ಅಷ್ಟರಲ್ಲಿ ಹೊರಗಿನಿಂದ, ಪದ್ಮನಾಭಣ್ಣ ಕರೀತಿದಾರೆ ಎಂಬ ಕೂಗು ಕೇಳಿಸಿತು.
ಬಂದೆ ಇರು ಎಂದವನೇ ತಿಮ್ಮಯ್ಯ, ಪದ್ಮನಾಭನ ಮನೆ ದಾರಿ ತುಳಿದ. ಈರ ಅವ್ವನಿಗೆ, ನೀನಾದ್ರು ಹೇಳ್‌ಬಾರ್‍ದ. ಹೇಗೋ ಅಕಾರ ಸಿಕ್ಕೈತೆ ಸರಿಯಾಗಿ ಬಳಸ್ಕೋಬೇಕು. ಯಾರ್‍ಯಾರಿಗೋ ಅಡಿಯಾಳಾಗಿರಬಾರದು ಎಂದ. ಅದೇನೋಪ್ಪ ನನ್ಗೆ ಅರ್ಥವಾಗೋಲ್ಲ. ನಿಂಗ್ಯಾಕೆ ಅದೆಲ್ಲಾ, ಚೆನ್ನಾಗಿ ಓದ್ಕೋ ಹೋಗು ಎಂದ್ಹೇಳಿ ಎದ್ದೋದಳು.
ಅರ್ಧ ಗಂಟೇಲಿ ವಾಪಸ್ಸು ಬಂದ ತಿಮ್ಮಯ್ಯ, ಲೋ ಈರ ಪದ್ಮನಾಭಣ್ಣೋರು ಕೆಲಸ ಕೊಡ್ತಾರಂತೆ, ಹೋಗ್ತೀಯೇನ್ಲಾ. ತಿಂಗ್ಳಿಗೆ ಎಂಟ್ನೂರ್ ಸಂಬ್ಳ ಅಂತೆ. ಅವರ ಕೋಳಿ ಪಾರಂನಲ್ಲಿ ಬರೆಯೋ ಕೆಲ್ಸಾನಂತೆ. ಓದಿದ್ದು ಸಾಕು ಸುಮ್ನೆ ಹೋಗ್ಲಾ ಎಂದ.
ನನ್ಗೆ ಅವರ್‍ಯಾವ ಕೆಲ್ಸಾನೂ ಬೇಡ ಎಂದು ತಿರಸ್ಕರಿಸಿದ ಈರ, ಗ್ರಾ,ಪಂ. ಅಧ್ಯಕ್ಷ ಗಾದಿ ಮಹತ್ವದ ಕುರಿತು ಮಾತು ಮುಂದುವರಿಸಲು ಕುಳಿತ. ನೆನ್ನೆ ರಾತ್ರಿ ಬೀದಿ ನಾಟ್ಕ ಕೆಡಿಸಲು ಕಳಿಸಿದ್ದು ಯಾರೂಂತ ಗೊತ್ತಾ ? ನೀನೇ ಹೇಳ್ತಿದ್ದೆ ಪದ್ಮನಾಭಣ್ಣನ ಅಪ್ಪ ಮೊದಲಿಂಗಲೂ ನಿಮ್ಮನ್ನೆಲ್ಲಾ ಹುರುಕಂಡ್ ತಿಂದಿರೋ ಬಗ್ಗೆ. ಅವ್ನ ಮಗ ಪದ್ಮನಾಭ ಸಾಚಾನ. ವಂಶದ ರಕ್ತ ಎಲ್ಲೋದೀತು. ಈಗ ಅವ್ನು ನಿನ್ ಮೇಲೆ ಈ ರೀತೀಲಿ ಸವಾರಿ ಮಾಡ್ತಾವ್ನೆ. ಅದೆಲ್ಲಾ ನಿನ್ಗೆ ಗೊತ್ತಾಗಲ್ವ ಎಂದು ಹೇಳಿದ. ಮುಂದುವರಿದು ಅರ್ಧ ಗಂಟೆವರೆಗೆ ಏನೇನೋ ಹೇಳುತ್ತಲೇ ಇದ್ದ. ಏನೊಂದೂ ಮಾತಾಡದ ತಿಮ್ಮಯ್ಯ ಮಗ ಮಾತು ನಿಲ್ಲಿಸಿದಾಗ ಎದ್ದು ಹೊರಗೆ ಹೋಗಿ ಗೋಡೆ ಒರಗಿ ಕುಂತ.
ಅಲ್ಲಿಗೂ ಬಂದ ಈರ, ಹೋಗ್ಲಿ ನಮ್ಮಟ್ಟಿ ಜನಕ್ಕೆ ಆಶ್ರಯ ಮನೆ ಸೈಟು ಹಂಚೋ ವಿಷ್ಯ ಏನಾಯ್ತು ಎಂದ. ಅದೇ ಮೊನ್ನೆ ಪಂಚಾಯ್ತಿ ಸಭೇಲಿ ಅದು ಚರ್ಚೆ ಆಯ್ತು. ಊರಿಂದ ಸ್ವಲ್ಪ ಮೇಲೆ ದಿಬ್ಬದ ಸರ್ಕಾರಿ ಜಮೀನ್‌ನಲ್ಲಿ ಸೈಟ್ ಕೊಡ್ಬೇಕು ಅಂತ ಅಕಾರಿಗಳು ಬಂದು ನೋಡ್ಕೊಂಡು ಹೋಗಿದ್ರಲ್ಲಾ ಅದರಂತೆ ಆಗಲಿಲ್ಲ.
ಊರೊಳಗಿನ ಜನ, ಹಟ್ಟಿ ಜನಕ್ಕೆ ದಿಬ್ಬದಲ್ಲಿ ಸೈಟ್ ಕೊಟ್ರೆ ‘ಮೇಲಿಂದ ಅವರ ಮನೆ ಮುಂದೆ ಮಳೆ ನೀರು ಹರಿದು ಊರೊಳಕ್ಕೆ ಬರುತ್ತೆ’ ಅಂತ ತಕರಾರು ತೆಗೆದ್ರು. ಪಂಚಾಯ್ತಿ ಸಭೆಗೆ ನುಗ್ಗಿ ಗಲಾಟೆ ಮಾಡಿದ್ರು. ಪದ್ಮನಾಭಣ್ಣೋರು ಮಾತ್ರ ದಿಬ್ಬದಲ್ಲೇ ಕೊಡ್ಬೇಕು ಅಂತ ಮಾತಾಡಿದ್ರು. ಆದ್ರೆ ಬಾಳ ಜನ ಸದಸ್ರು ಕತ್ತೆಸೆದ್ರು. ಊರಿಂದ ಕೆಳಕ್ಕೆ ಕುಂಬಾರ್ರ ಅವುಗೆ ಇದ್ವಲ್ಲಾ ಅಲ್ಲೇ ಸೈಟ್ ಹಂಚೋ ಹಂಗೆ ತೀರ್ಮಾನ ಆಯ್ತು. ಊರ್‍ನಲ್ಯಾಕೆ ಗಲಾಟೆ ಅಂತ ಪದ್ಮನಾಭಣ್ಣೋರು ಆ ತೀರ್ಮಾನ ಮಾಡಿದ್ರು. ಆಯ್ತು ಅಂತ ಅನುಮೋದ್ನೆಗೆ ಸೈನ್ ಹಾಕಿದೆ ಎಂದ.
ಛೇ ಎಂಥ ಕೆಲ್ಸಾ ಮಾಡಿದ್ದೀಯಾ. ಈಗ್ಲೇ ಬುದ್ಧಿ ಬರಲ್ಲಾ ಬಿಡು ಎಂದ ಈರ. ‘ಆ ಜಾಗ್‌ದಲ್ಲಿ ನಿನ್ಗೆ ಎಲ್ಲಿ ಬೇಕೋ ಅಲ್ಲೇ ಸೈಟ್ ತಗೋ ಅಂತ ಪದ್ಮನಾಭಣ್ಣೋರು ನನ್ಗೆ ಹೇಳವ್ರೆ ಬಿಡು, ಅದೆಲ್ಲಾ ಯಾಕೀಗ’ ಎಂದು ತಿಮ್ಮಯ್ಯ ಮಾತು ಮುಗಿಸಿದ. ಈರ ವೇದನೆಯಿಂದ ಒಳಗೆ ಹೋದ. ಹಾಸ್ಟೆಲ್‌ಗೆ ಹೊರಡುವ ಮನಸ್ಸಾಗಿ ಮುಖ ತೊಳೆಯಲು ಬಚ್ಚಲಿಗೆ ನಡೆದ. ತಿಮ್ಮಯ್ಯ ಗೋಡೆಗೆ ಒರಗಿ ಏನೋ ಗಹನವಾದ ಆಲೋಚನೆಯಲ್ಲಿ ತೊಡಗಿದ್ದ.
ಬಚ್ಚಲೆಂದರೆ ನಾಲ್ಕು ಕಡೆ ನಿಲ್ಲಿಸಿದ್ದ ತೆಂಗಿನ ಗರಿ ಮಧ್ಯೆ ಒಂದು ಉಲ್ಟು ಕಲ್ಲು. ಉಲ್ಟು ಕಲ್ಲಿನ ಅಲ್ಲಲ್ಲಿ ಸಣ್ಣಗೆ ನೀರು ನಿಂತು ಪಾಚಿ ಕಟ್ಟಿತ್ತು. ಬಚ್ಚಲಿಗೆ ಕಾಲಿಟ್ಟ ಈರನಿಗೆ ಕಲ್ಲಿನ ಉಳುಕಿನಲ್ಲಿದ್ದ ತುಣುಕು ನೀರಿನಿಂದ ಮುಖ ಪ್ರತಿಬಿಂಬಿಸಿತು. ಮಗುವಿನಂತೆ ಕುತೂಹಲದಿಂದ ಪುಡಿ ನೀರಿನಲ್ಲಿ ಅಸ್ಪಷ್ಟ ಮುಖ ನೋಡಿ ಕೊಂಡ ಈರ. ಏನೋ ಹೊಳೆದಂತಾಗಿ, ಹೌದು ಈ ಮನುಷ್ಯ ತನ್ನ ಮುಖವನ್ನು ಪ್ರತಿಬಿಂಬದಲ್ಲಿ ತನ್ನದೇ ಎಂದು ಗುರುತಿಸುವುದನ್ನು ಯಾವಾಗ ಕಂಡುಕೊಂಡ. ಸಾವಿರಾರು ವರ್ಷಗಳ ಹಿಂದೆ ಇರಬೇಕು. ಹಿಂದೆ ಮುಖ ನೋಡಿಕೊಳ್ಳುತ್ತಿದ್ದುದು ನಿಂತ ನೀರಲ್ಲೇ ಇರಬೇಕು ಎಂದುಕೊಂಡೇ ಮುಖ ತೊಳೆದು ಮುಗಿಸಿದ.
ಅಂಗಳದಲ್ಲಿ ಈರನ ಕೊನೆ ತಂಗಿ ಭಾಗ್ಯ, ಅಣ್ಣ ತಂದಿದ್ದ ಹೊಸ ಕನ್ನಡಿಯನ್ನು ಬಿಸಿಲಿಗೆ ಹಿಡಿದು ಹಂದಿ ಗೂಡಿನಂತಿದ್ದ ಮನೆ ಒಳಕ್ಕೆ ಬೆಳಕು ಬಿಡುತ್ತಾ ಆಟವಾಡುತ್ತಿದ್ದಳು. ಏ ಬೋಸುಡಿ ಬಾರೇ ಇಲ್ಲಿ. ಕನ್ನಡಿ ಬೆಳ್ಕ ಒಳಕ್ಕೆ ಬಿಡ್ತಾರೇನೇ. ಮನೆಗೆ ತಿಗ್ಣೆ ತುಂಬ್ಕೊಂಡು ಮಲಗ್ದಂಗೆ ಮಾಡ್ತಾವೆ ನೋಡು ಎಂದು ಚಂದ್ರಮ್ಮ ಗದರಿಸಿದಳು. ಇದನ್ನು ಕೇಳಿದ ಈರ ಕನ್ನಡಿ ಬೆಳಕ್ ಬಿಟ್ರೆ ತಿಗ್ಣೆ ಯಾಕ್ ಬರ್‍ತಾವವ್ವಾ ಎಂದ. ಅದೆಲ್ಲಾ ನಂಗೂ ಗೊತ್ತಿಲ್ಲಾ. ಏನೋ ಹಂಗೇಳ್ತಾರೆ. ನಿಜ ಆಲ್ದೇ ಆ ಮಾತ್ ಬಂದೈತಾ. ಒಳಕ್ ಕರೀ ಆ ಮುಂಡೇನಾ ಎಂದಳು.
ಓಡುತ್ತಾ ಬಂದು ಅಣ್ಣನ ಕೈಗೆ ಕನ್ನಡಿ ಕೊಟ್ಟು ಅವ್ವನಿಗೆ ಸಿಗದಂತೆ ಭಾಗ್ಯ ಓಡಿದಳು. ದೀಪ ಹಚ್ಚೋ ಸಣ್ಣ ಸ್ಟ್ಯಾಂಡಿನ ಮೇಲೆ ಮಾಮೂಲಿ ಜಾಗಕ್ಕೆ ಈರ ಕನ್ನಡಿ ಇಟ್ಟ. ಅಲ್ಲೊಂದು ಬಿಚ್ಚಿಟ್ಟಿದ್ದ ಸಣ್ಣ ಕಾಗದದಲ್ಲಿ ಧೂಳ್ತಾ ಕಾಣಿಸಿತು. ಇದ್ಯಾವುದವ್ವಾ ಧೂಳ್ತಾ ಎಂದ. ಅಷ್ಟರಲ್ಲಿ ಒಳಗೆ ಬಂದ ತಿಮ್ಮಯ್ಯ, ಅದೇ ಮೊನ್ನೆ ಬಸವಲಿಂಗೇಶ್ವರ ಸ್ವಾಮೀಜಿ ವರ್ಷದ ಭಿಕ್ಷಕ್ಕೆ ಊರಿಗೆ ಬಂದಿದ್ರು. ಆಗ ಊರ್ ಬಾಗ್ಲಿಗೆ ತೋರ್‍ಣ ಕಟ್ಟಾಕೋಗಿದ್ದೆ. ಸ್ವಾಮೀಜಿ ಮುಂದೆ ಎರಡ್ ಮಾರ್ ದೂರ್‍ದಲ್ಲಿ ಅಡ್ಡಬಿದ್ದೆ. ಸ್ವಾಮೀಜಿ ಪಕ್ಕದಲ್ಲಿ ಕೂತು ಭಿಕ್ಷೆ ಬಂದ ಮನೆ ಲೆಕ್ಕ ಬರೀತಿದ್ದ ಪದ್ಮನಾಭಣ್ಣ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಆಗವ್ನೆ ಎಂದು ನನ್ ಕಡೆ ಕೈತೋರಿದ್ರು. ಹೌದ ಎಂದ ಸ್ವಾಮೀಜಿ ದೂರದಲ್ಲಿ ನಿಂತಿದ್ದ ನನ್ ಕಡೆ ಈ ಧೂಳ್ತ ಸುತ್ತಿದ್ದ ಕಾಗ್ದ ಎಸೆದ್ರು ಎಂದ.
ಧೂಳ್ತ ಇದ್ದ ಕಾಗ್ದ ಬಗ್ಗಿ ತಗೋವಾಗ ಸ್ವಾಮೀಜಿ ಧನಿ ತಗ್ಗಿಸಿ, ಈ ಮೀಸ್ಲಾತಿ ಬಂದು ಎಲ್ಲಾ ಹಾಳಾಗೋಯ್ತು ಎಂದು ಪದ್ಮನಾಭಣ್ಣೋರ ಕಡೆ ಹೇಳಿದ್ದು ಕೇಳಿಸ್ತು. ನಾನೇನೂ ಮಾತಾಡದೆ ಧೂಳ್ತ ತಂದು ಇಲ್ಲಿಟ್ಟಿದೆ ಎಂದ.
ಈರ ಏನೋ ಗಮನ ಸೆಳೆದಂತಾಗಿ ಧೂಳ್ತಾ ಸುರಿದು ಆ ಕಾಗದದ ಚೂರನ್ನು ಕೈಗೆತ್ತಿಕೊಂಡ. ಅದು ಯಾವುದೋ ವಚನ ಸಂಗ್ರಹ ಪುಸ್ತಕದಿಂದ ಹರಿದ ಹಾಳೆಯಂತಿತ್ತು. ಮಾಸಿದ ಪಂಚೆಯಲ್ಲಿ ಮುಖ ಒರೆಸಿಕೊಳ್ಳುತ್ತಾ ಕಾಗದದಲ್ಲಿದ್ದುದನ್ನು ಓದಿಕೊಳ್ಳಲು ಮುಂದಾದ.
ಅಷ್ಟರಲ್ಲಿ, ನೀನ್ಹೇಳಿದ ಮೇಲೆ ನನ್ಗೆ ಈಗ ಎಲ್ಲಾ ಅರ್ಥ ಆಗ್ತಾ ಐತೆ. ಅದೇನೋ ಹೇಳ್ತಿದ್ಯಲ್ಲಾ ಈಗ ವಿವ್ರವಾಗಿ ಹೇಳ್ಬಾ. ನೋಡ್ತಾ ಇರು ಇನ್ ಮುಂದೆ ಹೆಂಗೆ ಅಕಾರ ಚಲಾಯಿಸ್ತೀನಿ ಅಂತ ಎಂದು ಹೇಳಿ ಮಗನ ಮಾತು ಕೇಳುವ ಹುಮ್ಮಸ್ಸಿನಲ್ಲಿ ತಿಮ್ಮಯ್ಯ ಕೂತ. ಈರನಿಗೆ ಏನೋ ಖುಷಿಯಾದಂತಾಗಿ ಅಪ್ಪನ ಜತೆ ಮಾತು ಮುಂದುವರೆಸಲು ಸಿದ್ಧಗೊಳ್ಳುತ್ತಾ ಕಾಗದದ ಅಕ್ಷರಗಳ ಕಡೆ ಕಣ್ಣಾಡಿಸಿದ.
ಕಣ್ಣ ಮುಚ್ಚಿ ಕನ್ನಡಿಯ ತೋರುವಂತೆ,
ಇರುಳು ಹಗಲಿನ ನಿದ್ರೆ ಸಾಲದೆ
ಬೆರಳನೆಣಿಸಿ ಪರಮಾರ್ಥವ ಹಡೆವರ, ಚೋದ್ಯವಲ್ಲವೇ ? ಹೇಳಾ
ಮೂಗ ಮುಚ್ಚಿ ಮುಕ್ತಿಯ ಬಯಸುವ
ನಾಚಿಕೆಯಿಲ್ಲದವರ ನಾನೇನೆಂಬೆ
ಕೂಡಲಸಂಗಮದೇವಾ....

Jul 26, 2008

ಬೆರಗಿಲ್ಲದ ಕುತೂಹಲ

ಎರೋಪ್ಲೈನ್ ಸದ್ದಿಗೆ ಹೊರ ಬಂದು ಕತ್ತೆತ್ತಿ ನೋಡುವ ಹಳ್ಳಿ ಜನರ ಕುತೂಹಲದಲ್ಲಿ ಮಳೆಗಾಗಿ ಮುಗಿಲು ನೋಡುವ ಬೆರಗು ಇರುವುದಿಲ್ಲ.

ನನಗೆ ಉತ್ತರ ಸಿಕ್ಕಿಲ್ಲ.

ನೂರಾರು ವರ್ಷಗಳ ಹಿಂದೆ ವಿದೇಶಿಯರು ನಮ್ಮ ದೇಶಕ್ಕೆ ಹಡಗಿನಲ್ಲಿ ಬಂದಿರುವ ಇತಿಹಾಸ ಕೇಳಿರುವ ನಮ್ಮೂರಿನ ಸಾವಿರಾರು ಜನರಲ್ಲಿ ಒಬ್ಬರಾದರು ಹಡಗಿನಲ್ಲಿ ಪ್ರಯಾಣಿಸಿದ ಅನುಭವ ಪಡೆದವರಿಲ್ಲ. ಹಡಗು ನೋಡಿರುವವರೂ ತೀರ ಕಡಿಮೆ. ಅಸ್ಟೆ ಏಕೆ ದಿನ ನಿತ್ಯ ಉಪ್ಪು ಬಳಸುತ್ತಿರುವ ನನ್ನೂರಿನ ಜನರಲ್ಲಿ ಬಹುತೇಕರು ಸಮುದ್ರವನ್ನೇ ನೋಡಲು ಸಾಧ್ಯವಾಗಿಲ್ಲ ಏಕೆ ಎಂಬ ತುಂಬ ಹಳೆಯ ಪ್ರಶ್ನೆಗಳಿಗೆ ನನಗೆ ಉತ್ತರ ಸಿಕ್ಕಿಲ್ಲ.